ಶುಕ್ರವಾರ, ಆಗಸ್ಟ್ 13, 2010

ಮುಸ್ಸಂಜೆ ಮಾತು

"ಯಾವ ಕಡೆಗೋ"
ಅಪ್ಪನ ದನಿ ಸಂಜೆ ಆಗುತ್ತಿದ್ದ ಹಾಗೆ ಅಂಗಿ ಹಾಕ್ಕೊಂಡು ಹೊರಟ ನನ್ನ ಕಿವಿ ತಾಕಿತು.
"ಮೇಲೆ" ಎಂದು ಉತ್ತರಿಸಿ ಚಪ್ಪಲಿ ಏರಿಸಿ ಹೊರಟೆ. ಮೇಲೆ ಅಂದ್ರೆ ಮೇಲಕ್ಕಲ್ಲ ಸ್ವಾಮಿ ನಮ್ಮ ಮನೆ, ಮಲೆನಾಡಿನ ಒಂದು ಸಣ್ಣ ಹಳ್ಳಿ. ಹಳ್ಳಿ ಅಂದ್ರು ತಪ್ಪಾಗುತ್ತೆ. ದಟ್ಟಡವಿಯ ನಡುವೆ ಕಟ್ಟಿರುವ ಪುಟ್ಟ ಒಂಟಿ ಮನೆ. ಪೇಟೆಗೆ ಹೋಗೋ ಟಾರ್ ರೋಡ್ ಗಿಂತ ಸ್ವಲ್ಪ ಕೆಳಗೆ ಇದೆ. ಹಾಗಾಗಿ ಈ ಪದ ಬಳಕೆಗೆ ಬಂದಿದೆ ಅಷ್ಟೆ.
ಇದು ಪ್ರತಿ ದಿನದ ಹಾಡು. ಸೂರ್ಯ ಮುಳುಗೋ ಸಮಯ ಹೆಚ್ಚು ಕಮ್ಮಿ ಆದ್ರೂ ಆಗ್ಬಹುದು, ಆದರೆ ನಾನು ಸಂಜೆ ಮನೆ ಬಿಡೊ ಸಮಯ ಹೆಚ್ಚು ಕಮ್ಮಿ ಆಗ್ತಿರ್ಲಿಲ್ಲ. ಹಾಗೇ ಅಪ್ಪಂಗೂ ಇದು ಅಭ್ಯಾಸ ಆಗಿಹೋಗಿತ್ತು. ಮಗ ದಾರಿ ತಪ್ಪಿದ್ದು ಅವರಿಗೂ ಗೊತ್ತಿತ್ತು ಅಂತೀರಾ? ಹ್ನೂಂ ಅದು ಸರೀನೇ...
ಬೇಸಿಗೆಯಲ್ಲಿ ಹಗಲೆಲ್ಲ ಕೆಲಸಗಾರರ ಬೆವರನ್ನೇ ಇಳಿಸಿದ್ರೂ ರಕ್ತವನ್ನೇ ಹೀರಿದಂತೆ ಕಾಣುವ ಮರೆಯಾಗಲು ಹೊರಟ ಸೂರ್ಯ, ಜೀರುಂಡೆಗಳ ಕೂಗಾಟವನ್ನೇ ಮೀರಿಸ ಹೊರಟ, ಧೋ ಎಂದು ಸುರಿಯುತ್ತಿರುವ ಮಲೆನಾಡಿನ ಮಳೆಗಾಲದ ಮಳೆ, ಚಂದ್ರ ಬರುವನೆಂಬ ಹೆದರಿಕೆಗೋ ಎಂಬಂತೆ ಕಾನನದ ಮಧ್ಯೆ ಮರೆಯಾಗಲು ಹೊರಟ ನವಿಲುಗಳು, ಇವೆಲ್ಲದರ ಸೌಂದರ್ಯವನ್ನು ಸವಿಯುತ್ತ ನನ್ನ ಸಂಜೆಯ ಪಯಣ.
ಸ್ನೇಹಿತನ ಮನೆಗೆ ಕೇವಲ ಹತ್ತು ನಿಮಿಷಗಳ ದಾರಿ. ಆದರೆ ಈ ಸಂಜೆಯ ಸೊಬಗು ಯಾವತ್ತೂ ನನ್ನನ್ನು ಹತ್ತು ನಿಮಿಷದಲ್ಲಿ ಕ್ರಮಿಸಲು ಬಿಟ್ಟಿಲ್ಲ. ನಾವಡ,ಧಾರೇಶ್ವರರ ಧಾಟಿಯಲ್ಲಿ ಭಾಗವತಿಗೆ, ಭಾವಗೀತೆಗಳು, ಹಿಂದಿ ಸಿನಿಮಾ ಹಾಡುಗಳು ಬಾಯಿಗೆ ಬಂದ ಹಾಗೆ ಒಂದರ ಮೇಲೊಂದರಂತೆ ಹಾಡುತ್ತಾ ಅಲ್ಲ ಕಿರುಚುತ್ತಾ ನಡೆಯೋದು ನನ್ನ ಅಭ್ಯಾಸ. ಈಗಲೂ ನಾನು ಮನೆಗೆ ಹೋದ್ರೆ ಊರವ್ರಿಗೆಲ್ಲ ಗೊತಾಗೋದು ಈ ಕಿರುಚಾಟದಿಂದಾನೇ. ಮನೆ ತಲುಪಿದ ಅರ್ಧಘಂಟೆಯೊಳಗೆ ಎಲ್ಲ ಬಂದು "ನಮ್ಮ ಊರಿಗೆ ಯಾರೇ ಬಂದ್ರು ನಮಗೆ ಗೊತಾಗುತ್ತೆ. ನೀನು ಕದ್ದು ಕೂತ್ರೆ ಗೊತಾಗೋಲ್ಲ ನಮಗೆ ಅಂದ್ಕೊಂಡಿದಿಯಾ? ಹೊರಗೆ ಬಾರಾ?" ಅಂತ ಒಬ್ರು ಕರದ್ರೆ ಇನ್ನೊಬ್ರು "ಯಾಕಾ ಬಂದೀ, ಅಲ್ಲಿಂದ ಬೆರೆಸಿದ್ರೇನೋ " ಅಂತಾನೋ ಇಲ್ಲಾ "ದುಡುದ್ ತಿನ್ನ್ರೋ ಅಂತಂದ್ರೆ ಈ ಹುಡುಗ್ರು ಮೂರು ಮೂರು ದಿನಕ್ಕೆ ಓಡಿ ಬರ್ತಾವಪ್ಪಾ" ಅಂತ ಹೇಳೋಕ್ ಶುರು ಮಾಡ್ತಾರೆ. ನಾನು ಉತ್ತರ ಹೇಳೋಕೆ ಮುಂಚೇನೆ ಅಪ್ಪ ಅವ್ರಿಗೆಲ್ಲ ಅವರ ಮಾತಿನ ಧಾಟಿಯಲ್ಲೇ ಉತ್ತರ ಕೊಟ್ಟು ಸುಮ್ನಾಗಿಸ್ತಾರೆ. ನನ್ನ ಕೈಲಿ ಆಗದ ಮಾತು ಬಿಡಿ....
ನನ್ನ ಬಾಲ್ಯದ ದಿನಚರಿಗೆ ಮತ್ತೆ ವಾಪಾಸಾಗ್ತೀನಿ. ದಿನಾ ಅವನ ಮನೆಗೆ ಹೋಗೋದೂ, ಒಂದು ಕಾಫೀ ಜೊತೆಗೆ ಏನಾದ್ರು ತಿನ್ನೋಕೆ. ಅಲ್ಲಿಂದ "ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ" ಅಂತ ಹಾಡುತ್ತಾ ವೈಕುಂಠಪುರದ ಕಡೆಗೆ ಒಂದು ಸಣ್ಣ ವಾಕಿಂಗ್. ಅಲ್ಲಿಂದ ಮತ್ತೆ ನಮ್ಮ ಮನೆಯ ದಟ್ಟಡವಿಯ ಹಾದಿಗೆ ವಾಪಾಸಾಗಿ ನಮ್ಮ ಕಟ್ಟೆ ಪುರಾಣ ಶುರು ಮಾಡ್ತಿದ್ವಿ. ವೇದ, ಉಪನಿಷತ್ ಗಳಿಂದ ಹಿಡಿದು ಪೇಟೆಯ ಪಡ್ಡೆ ಹುಡುಗರ ದುರ್ಗುಣಗಳು ಎಲ್ಲ ನಮ್ಮ ಚರ್ಚೆಯಲ್ಲಿ ಬರ್ತಿದ್ವು. ಕೆಲವೊಮ್ಮೆ ರಾತ್ರಿ ಹನ್ನೊಂದು ಘಂಟೆ ಆದ್ರು ನಮ್ಮ ಮಾತು ಮುಗೀತಿರ್ಲಿಲ್ಲ. ಮನೆಗೆ ಹೊರಡುವಾಗ ಇಬ್ರು ಹೇಳ್ಕೊಳೋದಿತ್ತು. "ಏನು ಮಾತಾಡಿದ್ವೋ ಇಷ್ಟೊತ್ತು " ಅಂತ, ಆದ್ರೆ ಇಬ್ರಿಗು ನೆನಪಿರ್ತಿರ್ಲಿಲ್ಲ.
ಈಗ ಇದು ಬರಿ ನೆನಪು ಮಾತ್ರ. ತಿಂಗಳಲ್ಲಿ ಒಮ್ಮೆ ಮಾತಾಡೋದು ಕಷ್ಟ. . ಜೀವನದ ನದಿಯಲ್ಲಿ ಇಬ್ರು ಕೊಚ್ಚಿ ಹೋಗಿಬಿಟ್ಟಿದಿವಿ. ಪ್ರವಾಹ ನಮ್ಮನ್ನ ಮನೆಯಿಂದ ಬಹುದೂರ ಎಳೆತಂದಿದೆ. ಇದು ಹೊಟ್ಟೆಪಾಡಲ್ಲ ಸ್ವಾಮಿ, ದುರಾಸೆ. ಒಂದಂತು ತಪ್ಪು ಮಾಡಿ ಕಳಕೊಂಡ್ವಿ ಆದ್ರೆ ಈ ಸ್ನೇಹವಾದರೂ ಕೊನೆತನಕ ಉಳಿಯಲಿ ಅನ್ನೋ ಆಸೆ.

4 ಕಾಮೆಂಟ್‌ಗಳು:

  1. ಇದರ ಬಗ್ಗೆ ಏನೂ ಹೇಳೋಲ್ಲ; ಬರೆಯೋಲ್ಲ.. ಹಾಗೆ ಮಾಡಹೋದರೆ ಅದು ಕೃತಕತೆಯಾದೀತು :-)
    ನಿರೂಪಣೆ ಚೆನ್ನಾಗಿದೆ... ನಿಮ್ಮ ಬತ್ತಳಿಕೆಯಿಂದ ಇನ್ನಷ್ಟು ನೆನಪುಗಳು ಹೊರಬೀಳಲಿ..
    ನ. ಗೋ. ಪ್ರ.

    ಪ್ರತ್ಯುತ್ತರಅಳಿಸಿ
  2. ಫಾರಿದಬಾದ್ ದಿನಚರಿಬಗ್ಗೆನು ಬರಿ...

    ಪ್ರತ್ಯುತ್ತರಅಳಿಸಿ
  3. @ prabhu - Thanks man
    @ Rajesh - As you know there is nothing special to write about that but still I will consider. Thanks for ur time

    ಪ್ರತ್ಯುತ್ತರಅಳಿಸಿ
  4. Mastu untu marrre nimma "lekhani" namgu ondu swalpa kodi weekend try madtivi

    Suchitra

    ಪ್ರತ್ಯುತ್ತರಅಳಿಸಿ